SEARCH

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policies, and Terms of Service.

    ಕೆಲಸದ ಅವಧಿ ಮುಗಿದ ಮೇಲೆ ಸಂಪರ್ಕ ಕಟ್‌ ! (Right to Disconnect Bill)

    6 hours ago

    News : ಲೋಕಸಭೆಯಲ್ಲಿ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರು ಸಂಪರ್ಕ ಕಡಿತಗೊಳಿಸುವ ಹಕ್ಕು ಮಸೂದೆ-2025 (ರೈಟ್‌ ಟು ಡಿಸ್‌ಕನೆಕ್ಟ್) ಎಂಬ ಖಾಸಗಿ ಮಸೂದೆಯನ್ನು ಮಂಡಿಸಿದ್ದಾರೆ. ಈ ಸಂಪರ್ಕ ಕಡಿತಗೊಳಿಸುವ ಹಕ್ಕು ಮಸೂದೆ ಅಂದರೆ ಏನು, ಅದು ಏನು ಹೇಳುತ್ತದೆ.

    ಏನಿದು ಸಂಪರ್ಕ ಕಡಿತ ಮಸೂದೆ?

    ಉದ್ಯೋಗಿಗಳು ತಮ್ಮ ಕೆಲಸದ ಅವಧಿ ಮುಗಿದ ಬಳಿಕ ಕಚೇರಿ ಸಂಬಂಧಿತ ಸಂಪರ್ಕಗಳಿಂದ (ಕರೆಗಳು, ಇಮೇಲ್‌ಗ‌ಳು, ಮೆಸೇಜ್‌ಗಳು ಇತ್ಯಾದಿ) ದೂರವಿರಲು ಅಥವಾ ಸಂಪರ್ಕ ಕಡಿತಗೊಳಿಸಲು ಕಾನೂನುಬದ್ಧ ಹಕ್ಕನ್ನು (ರೈಟ್‌ ಟು ಡಿಸ್‌ಕನೆಕ್ಟ್) ನೀಡುವುದೇ ಈ ಮಸೂದೆಯ ಪ್ರಮುಖ ಉದ್ದೇಶ. ಡಿಜಿಟಲ್‌ ಯುಗ ಮತ್ತು ರಿಮೋಟ್‌ ವರ್ಕ್‌ ಸಂಸ್ಕೃತಿಯಿಂದಾಗಿ ಕೆಲಸದ ಸಮಯ ಮತ್ತು ತನ್ನ ವೈಯಕ್ತಿಕ ಜೀವನದ ನಡುವೆ ನಿರ್ದಿಷ್ಟವಾದ ಅಂತರ ಕಾಯ್ದುಕೊಳ್ಳಲು ಈ ಮಸೂದೆ ಅನುಕೂಲ. ಈ ಮಸೂದೆಯು ಕೆಲಸದ ಒತ್ತಡವನ್ನು ಕಡಿಮೆ ಮಾಡಿ ನೌಕರರಿಗೆ ಕೆಲಸ ಮತ್ತು ತನ್ನ ಜೀವನವನ್ನು ಸಮತೋಲನವಾಗಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ.

     

    ಮಸೂದೆಯಲ್ಲಿ ಏನೇನಿದೆ?

    ಉದ್ಯೋಗಿಗಳ ಕೆಲಸದ ಅವಧಿ ಅನಂತರ ಕಂಪೆನಿಯಿಂದ ಸಂಪರ್ಕವನ್ನು ಕಡಿತಗೊಳಿಸಲು ಈ ಮಸೂದೆ ಪ್ರಯತ್ನಿಸುತ್ತಿದ್ದು, ಇದರಲ್ಲಿ ಪ್ರಮುಖ ನಿಬಂಧನೆಗಳನ್ನು ಉಲ್ಲೇಖೀಸಿದೆ. ಉದ್ಯೋಗಿಗಳು ಕೆಲಸದ ಸಮಯದ ಅನಂತರ ಕೆಲಸದ ಕರೆಗಳು ಅಥವಾ ಇಮೇಲ್‌ಗ‌ಳಿಗೆ ಉತ್ತರಿಸುವ ಅಗತ್ಯವಿಲ್ಲ. ಪ್ರತಿಕ್ರಿಯಿಸದ ಕಾರ್ಮಿಕರಿಗೆ ಕಂಪೆನಿಗಳು ದಂಡ ವಿಧಿಸಲು ಅವಕಾಶವಿಲ್ಲ. ಉದ್ಯೋಗ ದಾತರು ತುರ್ತು ಪರಿಸ್ಥಿತಿ ಸಮಯದಲ್ಲಿ ಕಾರ್ಮಿಕರೊಂದಿಗೆ ಮಾತುಕತೆ ನಡೆಸಲು ಕೆಲಸದ ಅವಧಿ ಅನಂತರವೂ ಉದ್ಯೋಗಿಗಳನ್ನು ಸಂಪರ್ಕಿಸಬಹುದು. ಈ ಶಿಷ್ಟಾಚಾರಗಳನ್ನು ವ್ಯಾಖ್ಯಾನಿಸಲು ಸಂಸ್ಥೆಗಳು ನೌಕರರ ಅಭಿವೃದ್ಧಿ ಸಮಿತಿಗಳನ್ನು ಸ್ಥಾಪಿಸಬೇಕು. ಕೆಲಸದ ಅವಧಿ ಅನಂತರದ ಸಂವಹನಗಳಿಗೆ ಪ್ರತ್ಯುತ್ತರಿಸಲು ಆಯ್ಕೆ ಮಾಡುವ ಕಾರ್ಮಿಕರು ಸಾಮಾನ್ಯ ದರದಲ್ಲಿ ಅಧಿಕಾರಾವಧಿ ವೇತನವನ್ನು ಪಡೆಯಬೇಕು. ನಿಯಮಗಳನ್ನು ಪಾಲಿಸದಿದ್ದರೆ ಒಟ್ಟು ಉದ್ಯೋಗಿ ಸಂಭಾವನೆಯ ಶೇ.1 ರಷ್ಟು ದಂಡ ವಿಧಿಸಬಹುದು ಎಂಬ ನಿಬಂಧನೆಗಳನ್ನು ಹೇಳಿದೆ.

     

    ಕೆಲಸದ ಅವಧಿ ಹೆಚ್ಚಳ ಸಾಧ್ಯತೆ

    ಕೆಲಸದ ಅವಧಿ ಅನಂತರ ಸಂಪರ್ಕ ಕಡಿತಗೊಳಿಸುವ ಮಸೂದೆ ಈಗಾಗಲೇ ಲೋಕಸಭೆಯಲ್ಲಿ ಮಂಡನೆಯಾಗಿದ್ದು, ಸಂಸತ್‌ ಅಂಗೀಕರಿಸಿದರೆ ವಾರದ ಕೆಲಸದ ಅವಧಿ ಹೆಚ್ಚಿಸುವ ಬಗ್ಗೆ ಚರ್ಚೆಗಳು ಮುನ್ನೆಲೆಗೆ ಬರುವ ಸಾಧ್ಯತೆಯಿದೆ. ಕೆಲಸದ ಬಳಿಕ ಕಾರ್ಮಿಕರನ್ನು ಸಂಪರ್ಕಿ ಸಬಾರದು ಎಂದರೆ ಹೆಚ್ಚು ಅವಧಿ ಕೆಲಸ ಮಾಡಿಸಿ ಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ. ಇತ್ತೀಚೆಗೆ ಇನ್ಫೋಸಿಸ್‌ನ ನಾರಾಯಣಮೂರ್ತಿ ಅವರು ವಾರಕ್ಕೆ 70 ಗಂಟೆ ಕೆಲಸದ ಅವಧಿಯನ್ನು ನಿಗದಿ ಮಾಡುವಂತೆ ಹೇಳಿಕೆ ನೀಡಿದ್ದರು.

    ಭಾರತದಲ್ಲಿ ಇನ್ನೂ ಕಾನೂನಾಗಿಲ್ಲ

    ಅಮೆರಿಕ, ಆಸ್ಟ್ರಿಯಾ, ರೊಮೇನಿಯಾ ದೇಶಗಳಲ್ಲಿ ಯಾವುದೇ ರೀತಿಯ ಸಂಪರ್ಕ ಕಡಿತಗೊಳಿಸುವ ಹಕ್ಕು ಕಾನೂನು ಇಲ್ಲ. ಜರ್ಮನಿಯಲ್ಲೂ ಈ ಕಾನೂನು ಅಸ್ತಿತ್ವದಲ್ಲಿ ಇಲ್ಲದಿದ್ದರೂ ಕೆಲವು ಕಂಪೆನಿಗಳು ತಮ್ಮದೇ ಆದ ಆಂತರಿಕ ನೀತಿಗಳನ್ನು ಹೊಂದಿವೆ. ಜತೆಗೆ ಡೆನ್ಮಾರ್ಕ್‌, ಫಿನ್‌ಲ್ಯಾಂಡ್ ಮತ್ತು ಸ್ವೀಡನ್‌ ದೇಶಗಳಲ್ಲಿ ಕೆಲಸದ ಸಮಯ ಮತ್ತು ವಿಶ್ರಾಂತಿಯ ಬಗ್ಗೆ ಕಾರ್ಮಿಕ ಕಾನೂನುಗಳು ರಚನೆಯಾಗಿವೆ. ಆದರೆ ಸಂಪರ್ಕ ಕಡಿತಗೊಳಿಸುವ ಪ್ರತ್ಯೇಕ ಕಾನೂನು ಇಲ್ಲ. ಅದೇ ರೀತಿ ಭಾರತದಲ್ಲಿ ಈ ಹಕ್ಕಿನ ಬಗ್ಗೆ ಮಸೂದೆ ಮಂಡನೆಯಾಗಿದೆ. ಆದರೆ ಅದು ಇನ್ನೂ ಕಾನೂನಾಗಿಲ್ಲ.

     

    ಖಾಸಗಿ ಮಸೂದೆ ಅಂಗೀಕಾರ ಸಾಧ್ಯತೆ ಕಡಿಮೆ

    ಸಂಸತ್ತಿನ ಯಾವುದೇ ಸದನದ ಸಚಿವರಲ್ಲದ ಸದಸ್ಯರು ಮಂಡಿಸುವ ಮಸೂದೆಯನ್ನು ಖಾಸಗಿ ಮಸೂದೆ ಎಂದು ಕರೆಯುತ್ತಾರೆ. ಸಾರ್ವಜನಿಕ ವಿಷಯದ ಬಗ್ಗೆ ಗಮನ ಸೆಳೆಯುವುದು ಅಥವಾ ಸರಕಾರವು ನಿರ್ಲಕ್ಷಿಸಿದ ವಿಷಯದ ಬಗ್ಗೆ ಶಾಸನ ರೂಪಿಸುವುದು ಇದರ ಪ್ರಮುಖ ಉದ್ದೇಶ. ಮುಖ್ಯವಾಗಿ ಈ ಖಾಸಗಿ ಮಸೂದೆ ಸರಕಾರಿ ಮಸೂದೆಗೆ ಸಂಪೂರ್ಣವಾಗಿ ವಿರುದ್ಧವಾಗಿರುತ್ತದೆ. ಸಚಿವರಲ್ಲದ ಸಂಸದರು ಅಧಿವೇಶನ ನಡೆಯುವಾಗ ಪ್ರತಿ ಶುಕ್ರವಾರ ಮಾತ್ರ ಈ ಖಾಸಗಿ ಮಸೂದೆಯನ್ನು ಮಂಡಿಸುತ್ತಾರೆ. ಇದಕ್ಕೆ ದೀರ್ಘ‌ ಚರ್ಚೆಗೆ ಅವಕಾಶ ಸಿಗುವುದಿಲ್ಲ. ಆದ್ದರಿಂದ ಈ ಮಸೂದೆಗಳು ಅಂಗೀಕಾರ ಆಗುವ ಸಾಧ್ಯತೆ ತುಂಬಾ ಕಡಿಮೆ. 1952 ರಿಂದ ಇಲ್ಲಿಯವರೆಗೂ 14ಕ್ಕಿಂತ ಕಡಿಮೆ ಮಸೂದೆಗಳಿಗೆ ಅಂಗೀಕಾರ ಸಿಕ್ಕಿದೆ.

     

    ಕಾನೂನು ಜಾರಿಯಾದ ದೇಶಗಳು

    1 ಫ್ರಾನ್ಸ್‌: ಸಂಪರ್ಕ ಕಡಿತಗೊಳಿಸುವ ಹಕ್ಕನ್ನು ಅನುಷ್ಠಾನಕ್ಕೆ ತಂದ ಮೊದಲ ದೇಶ ಫ್ರಾನ್ಸ್‌. 2017ರಲ್ಲಿ ತನ್ನ ಕಾರ್ಮಿಕ ಸಂಹಿತೆಯ ಭಾಗವಾಗಿ ಕಾನೂನನ್ನು ಜಾರಿಗೆ ತಂದಿತು. 50 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಂಪೆನಿಗಳು ಕೆಲಸದ ಸಮಯದ ಅನಂತರ ಡಿಜಿಟಲ್‌ ಸಂವಹನವನ್ನು ಮಿತಿಗೊಳಿಸುವ ನೀತಿಗಳನ್ನು ಸ್ಥಾಪಿಸಲು ಒಕ್ಕೂಟಗಳೊಂದಿಗೆ ಮಾತುಕತೆ ನಡೆಸಬೇಕೆಂದು ಇದು ಹೇಳುತ್ತದೆ. ವೈಯಕ್ತಿಕ ಸಮಯದಲ್ಲಿ ಕೆಲಸದ ಒತ್ತಡದಿಂದ ಉದ್ಯೋಗಿಗಳನ್ನು ರಕ್ಷಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಇದರ ಗುರಿ.

    2 ಇಟಲಿ: ಕಾರ್ಮಿಕ ಸುಧಾರಣೆಗಳ ಭಾಗವಾಗಿ 2017ರಲ್ಲಿ ಈ ಸಂಪರ್ಕ ಕಡಿತಗೊಳಿಸುವ ಹಕ್ಕನ್ನು ಶಾಸನದಲ್ಲಿ ಸೇರಿಸಿದೆ. ಇಟಲಿಯ ಕಾನೂನು ಹೊಂದಿಕೊಳ್ಳುವ ಕೆಲಸದ ವ್ಯವಸ್ಥೆಗಳು ಮತ್ತು ಹೆಚ್ಚುತ್ತಿರುವ ಟೆಲಿವಕಿìಂಗ್‌ಗೆ ಸಂಬಂಧಿಸಿದೆ. ನೌಕರರು ಸಾಮಾನ್ಯ ಕೆಲಸದ ಸಮಯದ ಅನಂತರ ಕೆಲಸಕ್ಕೆ ಸಂಬಂಧಿಸಿದ ಚಟುವಟಿಕೆಗಳಿಂದ ಸಂಪರ್ಕ ಕಡಿತಗೊಳಿಸುವ ಹಕ್ಕನ್ನು ಹೊಂದಿರುತ್ತಾರೆ. ಕೆಲಸದ ವಿಕಸನ ಸ್ವರೂಪವನ್ನು ರಕ್ಷಿಸುವ ಅಗತ್ಯಕ್ಕೆ ಪ್ರತಿಕ್ರಿಯೆಯಾಗಿ ಈ ಕಾನೂನು ಜಾರಿಗೆ ತರಲಾಯಿತು.

    3 ಸ್ಪೇನ್‌: ಸಂಪರ್ಕ ಕಡಿತಗೊಳಿಸುವ ಹಕ್ಕು ಕಾನೂ ನನ್ನು ಸ್ಪೇನ್‌ 2018ರಲ್ಲಿ ಪರಿಚಯಿಸಿತು. ಈ ಕಾನೂನಿನಡಿ ಉದ್ಯೋಗಿಗಳು ಕಚೇರಿ ಸಮ ಯದ ಹೊರಗೆ ಅದರಲ್ಲೂ ವಿಶೇಷವಾಗಿ ಡಿಜಿಟಲ್‌ ಜಾಗದಲ್ಲಿ ಕೆಲಸಕ್ಕೆ ಸಂಬಂಧಿಸಿದ ಸಂವಹನದಿಂದ ಸಂಪರ್ಕ ಕಡಿತಗೊಳಿಸುವ ಹಕ್ಕನ್ನು ಹೊಂದಿರುತ್ತಾರೆ. ಈ ಕಾನೂನು ಸಾರ್ವಜನಿಕ ಮತ್ತು ಖಾಸಗಿ ವಲಯದ ಉದ್ಯೋಗಿಗಳಿಗೆ ಅನ್ವಯಿಸುತ್ತದೆ. ಇದು ವೈಯಕ್ತಿಕ ಸಮಯ ಹಾಗೂ ಮಾನಸಿಕ ಯೋಗಕ್ಷೇಮವನ್ನು ಕಾಪಾಡುತ್ತದೆ.

    4 ಐರ್ಲೆಂಡ್‌: ಈ ಕಾನೂನನ್ನು ಐರ್ಲೆಂಡ್‌ನ‌ಲ್ಲಿ 2021ರಲ್ಲಿ ಜಾರಿಗೆ ತರಲಾಯಿತು. ಔಪಚಾರಿಕ ಶಾಸನದಲ್ಲಿ ಇದನ್ನು ಪ್ರತಿಪಾದಿಸದಿದ್ದರೂ, ಈ ಸಂಹಿತೆಯು ಉದ್ಯೋಗಿಗಳು ಮತ್ತು ಉದ್ಯೋಗದಾತರಿಗೆ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡುತ್ತದೆ. ಅಸಾಧಾರಣ ಸಂದರ್ಭಗಳನ್ನು ಹೊರತುಪಡಿಸಿ, ಸಾಮಾನ್ಯ ಕೆಲಸದ ಸಮಯದ ಹೊರಗೆ ಕಾರ್ಮಿಕರು ಕೆಲಸದ ಸಂವಹನದಲ್ಲಿ ತೊಡಗಿಸಿಕೊಳ್ಳದಿರುವ ಹಕ್ಕನ್ನು ಇದು ಸ್ಥಾಪಿಸುತ್ತದೆ. ಉದ್ಯೋಗದಾತರು ಉದ್ಯೋಗಿಗಳ ವಿಶ್ರಾಂತಿ ಸಮಯವನ್ನು ಗೌರವಿಸಬೇಕು, ಆರೋಗ್ಯಕರ ಕೆಲಸ-ಜೀವನ ಸಮತೋಲನವನ್ನು ಖಚಿತಪಡಿಸಿಕೊಳ್ಳಬೇಕು.

    5 ಪೋರ್ಚುಗಲ್‌: ಪೋರ್ಚುಗಲ್‌ ತನ್ನ ದೇಶದಲ್ಲಿ 2021ರಲ್ಲಿ ಹೊಸ ಕಾರ್ಮಿಕ ಕಾನೂನನ್ನು ಪರಿಚಯಿಸಿತು. ರಿಮೋಟ್‌ ಕೆಲಸಗಾರರಿಗೆ ನಿಯಮಿತ ಸಮಯದ ಅನಂತರ ಕೆಲಸದಿಂದ ಸಂಪರ್ಕ ಕಡಿತಗೊಳಿಸುವ ಹಕ್ಕನ್ನು ನೀಡಿದೆ. ವಿಶೇಷವಾಗಿ ಕೋವಿಡ್‌ 19ರ ಸಾಂಕ್ರಾಮಿಕ ರೋಗದಿಂದಾಗಿ ಕೆಲಸದಲ್ಲಿ ಆದ ಬದಲಾವಣೆಯ ಅನಂತರ ಈ ಶಾಸನವನ್ನು ಜಾರಿಗೆ ತರಲಾಗಿದೆ. ಈ ಕಾನೂನಿನಡಿಯಲ್ಲಿ, ಕೆಲಸದ ಅವಧಿ ಅನಂತರ ಕಾರ್ಮಿಕರನ್ನು ಸಂಪರ್ಕಿಸುವ ಉದ್ಯೋಗದಾತರಿಗೆ ಸರಕಾರ ದಂಡವನ್ನು ವಿಧಿಸುತ್ತದೆ.

    6 ಬೆಲ್ಜಿಯಂ: 2022ರಲ್ಲಿ ಬೆಲ್ಜಿಯಂ ಸಂಪರ್ಕ ಕಡಿತಗೊಳಿಸುವ ಹಕ್ಕನ್ನು ಅಂಗೀಕರಿಸಿತು. ಎಲ್ಲ ಫೆಡರಲ್‌ ಸಾರ್ವಜನಿಕ ವಲಯದ ಕಾರ್ಮಿಕರು ಕೆಲಸದ ಅವಧಿಯ ಅನಂತರ ಕೆಲಸಕ್ಕೆ ಸಂಬಂಧಿಸಿದ ಸಂವಹನಗಳಿಂದ ದೂರವಿರಬೇಕೆಂದು ಈ ಕಾನೂನು ಆದೇಶಿಸಿತು. ತುರ್ತು ಪರಿಸ್ಥಿತಿಯಲ್ಲಿ ಮಾತ್ರ ತನ್ನ ನೌಕರರನ್ನು ಸಂಪರ್ಕಿಸಲು ಉದ್ಯೋಗದಾತರಿಗೆ ಸೂಚನೆ ನೀಡಿದೆ. ಅದರಂತೆ ಆಸ್ಟ್ರೇಲಿಯಾದಲ್ಲೂ 2024ರಲ್ಲಿ ಈ ಸಂಪರ್ಕ ಕಡಿತಗೊಳಿಸುವ ಹಕ್ಕನ್ನು ಕಾನೂನಾಗಿ ಅಂಗೀಕರಿಸಲಾಗಿದೆ.

    Source: ಉದಯವಾಣಿ 

    Click here to Read More
    Previous Article
    ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆ ಖಾಲಿ !
    Next Article
    RITES recruitment 2025

    Related ಪ್ರಚಲಿತ ಘಟನೆಗಳು (CAs) Updates:

    Comments (0)

      Leave a Comment