ಸುದ್ದಿ: ಮನರೇಗಾ ಯೋಜನೆ 'ವಿಕಸಿತ್ ಭಾರತ್ ರೋಜ್ ಗಾರ್ ಆಯಂಡ್ ಅಜೀವಿಕಾ ಮಿಷನ್- ಗ್ರಾಮೀಣ ಯೋಜನೆ (ವಿಬಿ ಜಿ ರಾಮ್ ಜಿ) ಎಂದು ಬದಲಿಸುವ ಮಸೂದೆಯನ್ನು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಲೋಕಸಭೆಯಲ್ಲಿಂದು ಮಂಡಿಸಿದರು.
ಕೌಶಲರಹಿತ ಕೂಲಿ ಕೆಲಸ ಮಾಡಲು ಸ್ವಯಂಪ್ರೇರಿತರಾಗಿ ಬರುವ ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬದ ಪ್ರತಿ ವಯಸ್ಕ ವ್ಯಕ್ತಿಗೆ ಪ್ರತಿ ಹಣಕಾಸು ವರ್ಷದಲ್ಲಿ 125 ದಿನಗಳ ಕೆಲಸಕ್ಕೆ ಶಾಸನಬದ್ಧ ಖಾತರಿ ನೀಡುವುದು ಈ ಕಾಯ್ದೆಯ ಉದ್ದೇಶ. 2047ರ ಹೊತ್ತಿಗೆ ವಿಕಸಿತ ಭಾರತದ ಮುನ್ನೋಟಕ್ಕೆ ಅನುಗುಣವಾಗಿ ಗ್ರಾಮೀಣ ಚೌಕಟ್ಟನ್ನು ರೂಪಿಸಲು ಈ ಕಾಯ್ದೆ ಸಿದ್ಧಪಡಿಸಲಾಗಿದೆ. ಸಮೃದ್ಧ ಮತ್ತು ಚೈತನ್ಯಯುತ ಗ್ರಾಮೀಣ ಭಾರತಕ್ಕಾಗಿ ಸಶಕ್ತೀಕರಣ, ಪ್ರಗತಿ, ಸಮನ್ವಯ ಮತ್ತು ಪರಿಪೂರ್ಣತೆಯನ್ನು ಸಾಧಿಸುವ ಉದ್ದೇಶವನ್ನೂ ಇದು ಹೊಂದಿದೆ.
ಕೆಲಸದ ದಿನಗಳು :
ಪ್ರಸ್ತುತ ಮನರೇಗಾ ಯೋಜನೆಯಡಿ ಒಂದು ಕುಟುಂಬಕ್ಕೆ 100 ಕೆಸದ ದಿನಗಳನ್ನು ಹೊಂದಿದ್ದು, ವಿಬಿ ಜಿ ರಾಮ್ ಜಿ ಯೋಜನೆಯಡಿ 125 ಕೆಲಸದ ದಿನಗಳನ್ನು ಹೊಂದಿದೆ.
ರಾಜ್ಯಗಳಿಗೆ ಶೇ 40ರಷ್ಟು ಹೊರೆ :
ನರೇಗಾ ಯೋಜನೆಗೆ ಬೇಕಾದ ಸಂಪೂರ್ಣ ಅನುದಾನವನ್ನು ಕೇಂದ್ರ ಸರ್ಕಾರವೇ ಭರಿಸುತ್ತಿತ್ತು. ಆದರೆ, ಈಗ ರಾಜ್ಯ ಸರ್ಕಾರಗಳೂ ಹಣ ಭರಿಸಬೇಕಾಗುತ್ತದೆ. ಕೇಂದ್ರ ಸರ್ಕಾರವು ಶೇ 60ರಷ್ಟು ಹಣವನ್ನು, ರಾಜ್ಯ ಸರ್ಕಾರವು ಶೇ 40ರಷ್ಟು ಹಣವನ್ನು ಭರಿಸಬೇಕಾಗುತ್ತದೆ (ಎಲ್ಲ ರಾಜ್ಯ ಸರ್ಕಾರಗಳು ಮತ್ತು ವಿಧಾನಸಭೆ ಇರುವ ಕೇಂದ್ರಾಡಳಿತ ಪ್ರದೇಶಗಳು). ಈಶಾನ್ಯ ರಾಜ್ಯಗಳು, ಹಿಮಾಲಯದ ತಪ್ಪಲಿನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ (ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರ) ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅನುದಾನ ಹಂಚಿಕೆ ಅನುಪಾತವು ಶೇ 90:10ರಷ್ಟಿರುತ್ತದೆ. ವಿಧಾನಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರವೇ ಪೂರ್ತಿ ಹಣ ಭರಿಸುತ್ತದೆ.
ನಿರುದ್ಯೋಗ ಭತ್ಯೆ:
ಹೊಸ ಕಾಯ್ದೆಯ ಅನ್ವಯ, ಉದ್ಯೋಗ ಖಾತರಿ ಪಡೆಯದ ವ್ಯಕ್ತಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. ಈ ಭತ್ಯೆಯನ್ನು ರಾಜ್ಯ ಸರ್ಕಾರವೇ ನೀಡಬೇಕು ಎನ್ನುತ್ತದೆ ಮಸೂದೆ.
ಗರಿಷ್ಠ ಮಿತಿ ನಿಗದಿ :
ಕೇಂದ್ರ ಸರ್ಕಾರವು ಮೊದಲೇ ನಿಗದಿಪಡಿಸಿದ ನಿಯಮಾನುಸಾರ ಗರಿಷ್ಠ ಮಿತಿಗೆ ಒಳಪಟ್ಟು ರಾಜ್ಯ ಸರ್ಕಾರಗಳಿಗೆ ಹಣ ಮಂಜೂರು ಮಾಡುತ್ತದೆ. ಹಂಚಿಕೆ ಮಾಡಿದ ಅನುದಾನಕ್ಕಿಂತ ಹೆಚ್ಚುವರಿ ಕೆಲಸ ದಿನಗಳನ್ನು ಮಾಡಿಸಿದರೆ ರಾಜ್ಯ ಸರ್ಕಾರವೇ ಹೆಚ್ಚುವರಿ ಹಣವನ್ನು ಭರಿಸಬೇಕಾಗುತ್ತದೆ.
ಸಮಿತಿಗಳ ರಚನೆ:
ರಾಜ್ಯ ಸರ್ಕಾರಗಳಿಗೆ ಹಣ ಹಂಚಿಕೆ ಮಾಡುವ ಕುರಿತು ನಿರ್ಧಾರ ಕೈಗೊಳ್ಳಲು ಕೇಂದ್ರ ಸರ್ಕಾರವು 'ರಾಷ್ಟ್ರೀಯ ಮಟ್ಟದ ಸಂಚಾಲನಾ ಸಮಿತಿ'ಯನ್ನು ರಚಿಸಬೇಕು. ಜೊತೆಗೆ, ಈ ಕಾಯ್ದೆಯ ಎಲ್ಲ ಕೆಲಸ ಕಾರ್ಯಗಳ ಮೇಲ್ವಿಚಾರಣೆಯನ್ನೂ ನೋಡಿಕೊಳ್ಳಬೇಕು. ಅಂತೆಯೇ, ಕಾಯ್ದೆಯ ಕುರಿತು ಮಾರ್ಗದರ್ಶನ ನೀಡಲು ರಾಜ್ಯ ಸರ್ಕಾರಗಳೂ 'ರಾಜ್ಯ ಮಟ್ಟದ ಸಂಚಾಲನಾ ಸಮಿತಿ'ಯನ್ನು ರಚಿಸಿಕೊಳ್ಳಬೇಕು ಎನ್ನುತ್ತದೆ ಮಸೂದೆ.
ಕೇಂದ್ರ, ರಾಜ್ಯಗಳಲ್ಲಿ ಮಂಡಳಿ ರಚನೆ :
ಕಾಯ್ದೆ ಜಾರಿ ಸಂಬಂಧ ನಿಗಾ ಇರಿಸಲು ಕೇಂದ್ರ ಮಟ್ಟದಲ್ಲಿ 'ಕೇಂದ್ರೀಯ ಗ್ರಾಮೀಣ ಉದ್ಯೋಗ ಖಾತರಿ ಮಂಡಳಿ' ಮತ್ತು ರಾಜ್ಯ ಮಟ್ಟದಲ್ಲಿ 'ರಾಜ್ಯ ಗ್ರಾಮೀಣ ಉದ್ಯೋಗ ಖಾತರಿ ಮಂಡಳಿ'ಯನ್ನು ರಚಿಸಲಾಗುತ್ತದೆ.
ನಾಲ್ಕು ವಿಭಾಗಗಳಲ್ಲಿ ಕೆಲಸ :
ಉದ್ಯೋಗ ಖಾತರಿ ಮೂಲಕ ಯಾವೆಲ್ಲ ಕೆಲಸಗಳನ್ನು ಕೈಗೊಳ್ಳಬಹುದು ಎನ್ನುವ ಬಗ್ಗೆ ಮಸೂದೆಯಲ್ಲಿ ಹೇಳಲಾಗಿದೆ. ಇದನ್ನು ಒಟ್ಟು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಲಾಗಿದೆ.
1. ಜಲ ಸಂಬಂಧಿತ ಕಾರ್ಯಗಳು
2. ಗ್ರಾಮೀಣ ಭಾಗದ ಮೂಲಸೌಕರ್ಯ ನಿರ್ಮಾಣ
3. ಜೀವನೋಪಾಯಕ್ಕೆ ಸಂಬಂಧಿತ ಮೂಲಸೌಕರ್ಯ ನಿರ್ಮಾಣ (ತರಬೇತಿ ಕೇಂದ್ರಗಳು, ಸಂತೆ ಮಾರುಕಟ್ಟೆ ನಿರ್ಮಾಣ, ಆಹಾರ ಸಂಗ್ರಹಿಸಲು ಸಲುವಾಗಿ ಕಟ್ಟಡ ನಿರ್ಮಾಣ, ಹೈನುಕಾರಿಕೆಗೆ ಸಂಬಂಧಿಸಿದ ಕಟ್ಟಡಗಳ ನಿರ್ಮಾಣ)
4. ವಿಪತ್ತು ತಡೆ ಸಂಬಂಧಿತ ನಿರ್ಮಾಣ ಕಾರ್ಯಗಳು (ನಿರಾಶ್ರಿತ ಶಿಬಿರಗಳ ನಿರ್ಮಾಣ, ಕೆರೆ-ಕಟ್ಟೆಗಳು ಉಕ್ಕಿ ಹರಿಯದಂಥ ನಿರ್ಮಾಣ ಕಾರ್ಯ, ನೈಸರ್ಗಿಕ ವಿಪತ್ತಿನಿಂದ ಹಾಳಾದ ರಸ್ತೆಗಳ ದುರಸ್ತಿ, ಬಿರುಗಾಳಿಯಿಂದ ನಾಶವಾದ ತೋಟ ಮತ್ತು ಮನೆ ಮರು ನಿರ್ಮಾಣ, ಕಾಳ್ಗಿಚ್ಚು ನಿಯಂತ್ರಣ ಕಾರ್ಯಗಳು)
ಬಯೊಮೆಟ್ರಿಕ್ ಕಡ್ಡಾಯ :
*ಕಾರ್ಮಿಕರು, ಅಧಿಕಾರಿಗಳಿಗೆ ಬಯೊಮೆಟ್ರಿಕ್ ದೃಢೀಕರಣ ಕಡ್ಡಾಯ
*ಕೆಲಸದ ಮೇಲೆ ನಿಗಾ ಇರಿಸಲು, ಕೆಲಸದ ಸ್ಥಳದ ಡಿಜಿಟಲ್ ಮ್ಯಾಪಿಂಗ್, ಉಪಗ್ರಹ ಚಿತ್ರಗಳು ಸೇರಿದಂತೆ ಇತರೆ ಜಿಯೊಸ್ಪೇಷಿಯಲ್ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು
*ಕೆಲಸಕ್ಕಾಗಿ ಮೊಬೈಲ್‌ನಲ್ಲಿ ಅರ್ಜಿ ಸಲ್ಲಿಸಬೇಕು, ಯಾವ ಕೆಲಸವಾಗಬೇಕು, ಎಷ್ಟು ಜನ ಕೆಲಸಕ್ಕೆ ಬಂದಿದ್ದಾರೆ ಎಂಬುದನ್ನು ದಾಖಲಿಸಬೇಕು, ದಿನಗೂಲಿ ನೀಡಿಕೆ, ಕೆಲಸದ ಪ್ರಗತಿ ಮೇಲೆ ನಿಗಾ ಇಡುವುದಕ್ಕೆ ಡ್ಯಾಶ್‌ಬೋರ್ಡ್ ಮೂಲಕ ಮೇಲ್ವಿಚಾರಣೆ ನಡೆಸಬೇಕು
*ಕೆಲಸದ ಪ್ರಗತಿ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಡಿಜಿಟಲ್ ವೇದಿಕೆ ಮೂಲಕವೂ ಮಾಹಿತಿ ನೀಡಬೇಕು. ತಪಾಸಣೆ ಕೈಗೊಂಡ ಬಗ್ಗೆ, ಹಣ ಪಾವತಿಯಾದ ಬಗ್ಗೆ, ಸಂಬಂಧಪಟ್ಟ ಅಧಿಕಾರಿಗಳ ಹೆಸರು ಸೇರಿ ಎಲ್ಲ ಮಾಹಿತಿಯನ್ನು ನೀಡಬೇಕು.